Ad Code

Responsive Advertisement

ಕಾಫಿ ಹುಟ್ಟಿನ ಕಥೆ


ಕಾಫಿ ಹುಟ್ಟಿನ ಕಥೆ

ಕಾಫಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ನಮ್ಮ ರಾಜ್ಯದ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆ. ಒಂದು ಕಾಲಕ್ಕೆ ಇಡೀ ದೇಶದಲ್ಲೇ ಹೆಸರು ಮಾಡಿದ ಕಾಫಿಪುಡಿ ಈ ಜಿಲ್ಲೆಗಳಿಂದ ಸರಬರಾಜಾಗುತ್ತಿತ್ತು. ಅನಾದಿಕಾಲದಿಂದಲೂ ಬಳಕೆಗೆ ಬಂದ ಈ ಪೇಯ ಮನುಷ್ಯನ ಮನಸ್ಸನ್ನು ಉಲ್ಲಾಸಗೊಳಿಸುವ ಪೇಯವೆಂದೇ ಪರಿಗಣಿತವಾಗಿ ಬಳೆಕೆಯಾಗುತ್ತಿತ್ತು. ಇಂದಿಗೂ ಅದೇ ಮಾದರಿಯ ರೂಢಿ ಚಾಲ್ತಿಯಲ್ಲಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಆಧುನಿಕ ದಿನಮಾನದಲ್ಲಿ ಕಾಫಿ ಮತ್ತು ಚಹಾ ಸೇವನೆ ಬಹುಪಾಲು ಚಟವಾಗಿ ಬದಲಾಗಿ ಹೋಗಿದೆ. ಹೀಗೆ ಜನರ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿ ಸೇರಿಕೊಂಡಿರುವ ಕಾಫಿ ಉಗಮದ ವಿಚಾರ ಮಾತ್ರ ಇಂದಿಗೂ ಅಷ್ಟೇ ರೋಚಕ.

ಕಾಫಿ : ಮೊದಲ ನೋಟಕ್ಕೆ ಪುಟ್ಟ ಸಸ್ಯದಂತೆ ಕಾಣುವ ಪುಟಾಣಿ ಮರವಿದು. (ಇದರ ಜಾತಿ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಇದನ್ನು ಮರವೆಂದು ಕರೆಯಲಾಗುತ್ತದೆ.) ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ರೂಬಿಯೇಸಿ ಕುಟುಂಬದ ಒಂದು ಸಸ್ಯ ತಳಿ. ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಬೆಳೆಯುವ ಗಿಡ. ಈ ಗಿಡದ ಬೀಜಗಳನ್ನು ಪಡೆದುಕೊಂಡು, ಅವುಗಳನ್ನು ಹುರಿದು ಪುಡಿಮಾಡಿ, ಅದರಿಂದ ಪಾನೀಯವನ್ನು ತಯಾರಿಸಿ ಕುಡಿಯಲಾಗುತ್ತದೆ. ಈ ಪಾನೀಯ ಮಾನಸಿಕ ಒತ್ತಡವನ್ನು ನಿವಾರಿಸಿ ದೇಹಕ್ಕೆ ಹೊಸ ಚೈತನ್ಯ ಒದಗಿಸಿಕೊಡುತ್ತದೆ ಎನ್ನುವುದು ವೈದ್ಯ ಲೋಕದ ಮಾತು. ಹೀಗಿರುವ ಕಾಫಿ ಗಿಡದಲ್ಲಿ ಸುಮಾರು 45 ಕ್ಕೂ ಹೆಚ್ಚು ಪ್ರಬೇಧಗಳಿವೆ. ಆರ್ಥೀಕತೆ ಲೆಕ್ಕಾಚಾರದಿಂದ ಸದ್ಯ ನಮ್ಮದೇಶ ಮತ್ತು ರಾಜ್ಯದಲ್ಲಿ ಅರೇಬಿಕಾ, ರೋಬಾಸ್ಟಾ, ಕ್ಯಾನಿಪೋರಾ, ಲೈಬೀರಿಕಾ, ರೆಸಿಮೋಸಾ, ಅಬೆಯಾಕುಟೆ ತಳಿಗಳನ್ನು ಬೆಳೆಯಲಾಗುತ್ತದೆ. ಮಾಹಿತಿ ಪ್ರಕಾರ ವಿಶ್ವದ ಶೇಕಡಾ 75 ಭಾಗ ಕಾಫಿ ಬೀಜವನ್ನು ಅರೇಬಿಕಾ ತಳಿಯಿಂದಲೂ ಉಳಿದ 20 ಭಾಗವನ್ನು ಕ್ಯಾನಿಪೋರಾ ತಳಿಯಿಂದ ಪಡೆದುಕೊಳ್ಳಲಾಗುತ್ತಿದೆ.

ಕಾಫಿ ಬೆಳೆ ಇತಿಹಾಸ : ಕಾಫಿಗೆ ಈ ಹೆಸರು ಬಂದಿದ್ದು ಅರೇಬಿಕ್ ಭಾಷೆಯಿಂದ ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ. ಅರೇಬಿಕ್ ಭಾಷೆಯ ಕಹ್ ವ ಪದದಿಂದ ಕಾಫಿ ಪದ ಹುಟ್ಟಿಕೊಂಡಿದೆಯಂತೆ. ಆದರೆ ಇದಕ್ಕಿಂತ ಹೆಚ್ಚಿನ ಮನ್ನಣೇ ಪಡೆದುಕೊಂಡಿರುವ ಇತಿಹಾಸದ ಲೆಕ್ಕಾಚಾರದ ಪ್ರಕಾರ ಇತಿಯೋಪಿಯಾದ ಕಾಫ ಎಂಬ ಪ್ರದೇಶದಲ್ಲಿ (ಅಬಿಸೀನಿಯ) ಇದು ಕಾಣಿಸಿಕೊಂಡಿದ್ದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನುವುದು ಹಲವರ ಮಾತು. ಆದರೆ ಕಾಫಿಯ ಬಳಕೆ ವಿಚಾರದಲ್ಲಿ ಅಧೀಕೃತ ದಾಖಲೆ ಸಿಕ್ಕಿರುವುದು ಅರೇಬಿಯಾದಲ್ಲಿ. ದಂತಕತೆಗಳ ಪ್ರಕಾರ ಅರೇಬಿಯಾದಲ್ಲಿ ಬಹಳ ಹಿಂದೆ ಕಲ್ಬಿ ಎನ್ನುವ ಆಡು ಕಾಯುವಾತ ಒಂದು ದಿನ ಆಡು ಕಾಯುವ ವೇಳೆ ಆತನಿಗೆ ಕೆಂಬಣ್ಣದ ಹಣ್ಣಿನ ಗಿಡವೊಂದು ಕಂಡು ಬಂತಂತೆ. ಅದನ್ನು ನೋಡಿದ ಆತ ಹಣ್ಣೊಂದನ್ನು ಬಿಡಿಸಿಕೊಂಡು ತಿಂದನಂತೆ. ಹಣ್ಣು ತಿಂದ ಬಳಿಕ ಆತನಿಗೆ ನವಚೈತನ್ಯ ಹಾಗೂ ಉಲ್ಲಾಸ ಉಂಟಾಯಿತಂತೆ. ಹೀಗಾಗಿ ಆತ ಆ ಹಣ್ಣನ್ನು ಸಂಗ್ರಹಿಸಿ ಇತರರಿಗೆ ನೀಡಿ ಅದರ ಬಗ್ಗೆ ವಿವರ ನೀಡಿದನಂತೆ. ಹೀಗೆ ಆರಂಭವಾದ ಕಾಫಿ ಬಳಕೆ ನಂತರದ ದಿನಗಳಲ್ಲಿ ನಿಧಾನವಾಗಿ ಅರೆಬೀಯಾ ತುಂಬಾ ಪ್ರಚಾರಕ್ಕೆ ಬಂದು ಅದನ್ನ ಪೇಯವಾಗಿ ಬಳಕೆ ಮಾಡುವ ಹೊಸ ಪರಿಪಾಠ ಆರಂಭವಾಯಿತಂತೆ.

ಮೊದಮೊದಲು ಕೇವಲ ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರ ಈ ಪೇಯದ ಬಳಕೆಗೆ ಅವಕಾಶ ಮಾಡಿಕೊಡಲಾಗಿತ್ತಂತೆ. ನಂತರ ಹಣ್ಣಿನಲ್ಲಿನ ಆರೋಗ್ಯಕರ ಗುಣಗಳ ಬಗ್ಗೆ ಅರಿವು ಮೂಡಿದ ಬಳಿಕ ಇದರ ಬಳಕೆ ನಿಧಾನವಾಗಿ ಜನರಲ್ಲಿ ಆರಂಭವಾಗಿ, ಬಳಿಕ ದಿನಬಳಕೆ ಪೇಯವಾಗಿಯೂ ಕಾಫಿ ಜನಪ್ರಿಯತೆ ಪಡೆದುಕೊಂಡಿತು. ಕಾಫಿಯ ಚೇತೋಹಾರಿ ಗುಣಗಳ ಕಾರಣದಿಂದ ಈ ಬೆಳೆ ನಿಧಾನವಾಗಿ ಅರೇಬಿಯಾವನ್ನು ಬಿಟ್ಟು ಪ್ರಪಂಚದ ಇತರ ಭಾಗಗಳಿಗೂ ಹರಡಿ, ಯುರೋಪ್, ಆಫ್ರಿಕಾ, ಏಷ್ಯಾ ಖಂಡಗಳಲ್ಲೂ ಇದರ ಬಳಕೆ ಆರಂಭವಾಯಿತು.

ಅಬಿಸೀನಿಯಾದಿಂದ ಅರೇಬಿಯಾಕ್ಕೆ ಬಂದ ಕಾಫಿ ಆ ಬಳಿಕ ಪರ್ಷಿಯಾ, ಮೆಕ್ಕಾ ಹಾಗೂ ಈಜಿಪ್ಟ್ ದೇಶಗಳಿಗೂ ಹರಡಿತು. ಸುಮಾರು 200 ವರ್ಷಗಳ ಕಾಲ ಅರೇಬಿಯಾದಲ್ಲಿ ಇದ್ದ ಕಾಫಿ ಆ ನಂತರ ಜಗತ್ತಿನ ಇತರೆಡೆಗೆ ಬೆಳವಣೆಗೆ ಸಲುವಾಗಿ ರಫ್ತಾಯಿತು. 16ನೇ ಶತಮಾನದಲ್ಲಿ ಏಷ್ಯಾ ಹಾಗೂ ಭಾರತಕ್ಕೆ ಕಾಲಿಟ್ಟ ಕಾಫಿ ಆ ಬಳಿಕ ಮೂಲಕ್ಕಿಂತ ಹೆಚ್ಚಾಗಿ ಭಾರತದ ಹೆಸರಲ್ಲೇ ಪ್ರಸಿದ್ದಿಯಾಯಿತು. ಮೆಕ್ಕಾಗೆ ಹೋಗಿದ್ದ ಮಹಮ್ಮದೀಯರ ಗುರು ಬಾಬಾ ಬುಡನ್ ಮೊದಲ ಬಾರಿಗೆ ಏಳು ಕಾಫಿ ಬೀಜಗಳನ್ನು ಮೈಸೂರು ಸಂಸ್ಥಾನದ ಒಡೆತನದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ತಮ್ಮ ಆಶ್ರಮವಿದ್ದ ಬೆಟ್ಟದ ಮೇಲೆ ಹಾಕಿದರಂತೆ. ಈ ಬೀಜಗಳಿಂದ ಮುಂದೆ ಬೆಳೆದ ಸಸಿಗಳೇ ಮುಂದೆ ಭಾರತದಲ್ಲಿ ಬೆಳೆದ ಕಾಫಿ ಗಿಡಗಳ ಮೂಲಗಳಂತೆ. 1870ರಲ್ಲಿ ವಿಶ್ವದಲ್ಲಿ ಅತಿಹೆಚ್ಚು ಕಾಫಿ ಬೆಳೆಯುವ ಮೊದಲ ಮೂರು ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಒಂದಾಗಿತ್ತು ಎನ್ನುವುದು ಹೆಮ್ಮೆಯ ವಿಚಾರ. ದೇಶಕ್ಕೆ ಆ ಶ್ರೇಯವನ್ನೊದಗಿಸಿಕೊಟ್ಟಿದ್ದು ನಮ್ಮ ಕರ್ನಾಟಕವೆನ್ನುವುದು ಮತ್ತೂ ಹೆಮ್ಮೆಪಡುವ ವಿಚಾರ.

ಕಾಫಿ ವರ್ಗೀಕರಣ : ಕಾಫಿ ಜಾತಿಯನ್ನು ಪ್ರಮುಖವಾಗಿ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಪ್ಯಾರಾ ಕಾಫಿ, ಆಗ್ರೋ ಕಾಫಿಯ, ಮಸ್ಕರೋ ಮತ್ತು ಯೂ ಕಾಫಿಯಾ ಎಂದು ಇವನ್ನು ಕರೆಯಲಾಗುತ್ತದೆ. ಇವುಗಳಲ್ಲಿ ಯು ಕಾಫಿಯ ಮುಖ್ಯವಾದುದು. ಇದರಲ್ಲಿ ಸುಮಾರು ಹದಿನೈದು ಪ್ರಬೇಧಗಳಿವೆ. ಇವನ್ನೂ ಐದು ಉಪಪ್ರಬೇಧಗಳಾಗಿ ವಿಂಗಡಿಸಲಾಗಿದೆ. ಎರಿತ್ರೋಕಾಫೀಯಾ, ಪ್ಯಾಕಿಕಾಫೀಯಾ, ಮೆಲಾನೋಕಾಫೀಯಾ, ನ್ಯಾನೋಕಾಫೀಯಾ ಮತ್ತು ಮೊಜಾಂಬಿಕಾಫೀಯ ಎಂದು ಇವನ್ನು ಕರೆಯಲಾಗುತ್ತದೆ. ಇವುಗಳಲ್ಲೂ ಉಪವಿಭಾಗವಿದ್ದು ಈ ಸಾಲಿನಲ್ಲಿ ಎರಿತ್ರೋ ಕಾಫೀಯ ಮುಖ್ಯವಾಗುತ್ತದೆ. ಇದೇ ಪ್ರಪ್ರಂಚದಾದ್ಯಂತ ಹೆಚ್ಚು ಬಳಕೆಯಲ್ಲಿರುವ ಕಾಫಿ ಅರೇಬಿಕಾದ ಮೂಲ.

ಭಾರತದಲ್ಲಿ ಮೊದಲು ಬೆಳೆದ ತಳಿ ಚಿಕ್ಸ್ ಮತ್ತು ಕೂರ್ಗ ಎಂಬ ಅರೇಬಿಕಾ ತಳಿಗಳಿಗಳು. ಇವಕ್ಕೆ ರೋಗ ನಿರೋಧಕ ಗುಣವಿಲ್ಲದ ಕಾರಣ ನಂತರ ಇವುಗಳನ್ನೇ ತಳಿ ಸಂಕರಣಕ್ಕೆ ಒಳಪಡಿಸಿ ಬಳಿಕ ಹೊಸ ತಳಿಗಳ ಅನ್ವೇಷಣೆ ಮಾಡಲಾಯಿತು. ಇದರ ಜೊತೆಗೆ ರೋಬಾಸ್ಟ್ ಅಥವಾ ಮರಗಾಫಿ ಎಂಬ ತಳಿಯನ್ನೂ ಕಾಫಿ ಬೆಳೆಯಲ್ಲಿ ಅಳವಡಿಸಿಕೊಳ್ಳಲಾಯಿತು. ಭಾರತದಲ್ಲಿ ವಿದೇಶಿ ಕಾಫಿ ಗಿಡವನ್ನು ಸ್ಥಳೀಯ ವಾತಾವರಣಕ್ಕೆ ಅಳವಡಿಸಿ ಇಲ್ಲಿನ ತಳಿ ಅಭಿವೃದ್ದಿ ಪಡಿಸುವ ಕಾರ್ಯ 1925 ಮತ್ತು 26ನೇ ಇಸವಿಯಲ್ಲಿ ನಡೆಯಿತು.

ಬಾಳೆ ಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರ ತೆರೆದ ಮೈಸೂರು ಸರ್ಕಾರ ಇಲ್ಲಿ ಹೊಸ ತಳಿಗಳ ಅನ್ವೇಷಣೆ ನಡೆಸಿ ಇಲ್ಲಿಗೆ ಸೂಕ್ತವಾಗುವ ಹಲವು ತಳಿಗಳನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಇಂದಿಗೂ ಬಳಕೆಯಲ್ಲಿರುವ ಸೆಲೆಕ್ಷನ್ ತಳಿಗಳು ಅವಕ್ಕೆ ಸಾಕ್ಷಿ. ಇದಾದ ಬಳಿಕ ಕಾಫಿ ತಳಿ ಸಂರಕ್ಷಣೆ ಸಲುವಾಗಿ ಇದೇ ಸಂಸ್ಥೆ ಇಲ್ಲೊಂದು ಜೀನ್ ಬ್ಯಾಂಕನ್ನು ಆರಂಭಿಸಿದೆ. ಇಲ್ಲಿ 21 ವಿವಿಧ ಬಗೆಯ ತಳಿಗಳು ಹಾಗೂ ಹತ್ತಾರು ಮಿಶ್ರತಳಿಗಳ ಸಂಗ್ರಹವಿದೆ. ವಿಶೇಷದ ವಿಚಾರ ಎಂದರೆ ಇಲ್ಲಿರುವ ಬಹುಪಾಲಿನ ತಳಿಯಮೂಲ ಅಡಗಿರುವುದು ಪ್ರಾಚೀನ ಇಥಿಯೋಪಿಯಾ ತಳಿಯದ್ದು.

ಕಾಫಿ ಗಿಡದ ಜೀವನ : ಕಾಫಿ ಗಿಡದ ಸಾಗುವಳಿ ಇತರ ಗಿಡಗಳ ಸಾಗುವಳಿಯಂತೆಯೇ. ಒಳ್ಳೇ ಬೀಜಗಳನ್ನು ಆಯ್ದು ನರ್ಸರಿಗಳಲ್ಲಿ ಅವುಗಳನ್ನ ಪಾಲೆ ಪೋಷಣೆ ಮಾಡಿ ಗಿಡ ನಾಟಿಗೆ ಸಿದ್ದವಾಗುವಂತೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಆರಕ್ಕೂ ಹೆಚ್ಚು ಎಲೆ ಹೊಂದಿದ ಗಿಡಗಳಾದರೆ ಅವುಗಳ ವಾತಾವರಣ ಹೊಂದಿಕೆ ಸಾಮರ್ಥ್ಯ ಅಧಿಕ. ಹೀಗೆ ಸಿದ್ದಮಾಡಿಕೊಂಡ ಗಿಡಗಳನ್ನು ನೆಡುವ ಮೊದಲ ಅದಕ್ಕೆಂದೇ ನಿಗದಿತ ಅಳತೆ ಪ್ರಮಾಣದ ಗುಂಡಿಗಳನ್ನು ಸಿದ್ದಮಾಡಿಟ್ಟುಕೊಳ್ಳಬೇಕು. ಈ ಕಾರ್ಯಕ್ಕೆ ಏಪ್ರಿಲ್ – ಮೇ ತಿಂಗಳು ಸೂಕ್ತ ಕಾಲ. ಇದಾದ ಬಳಿಕ ಭಾರತದಲ್ಲಿ ಆರಂಭವಾಗುವ ಮಳೆಗಾಲದ ಆಧಾರದಲ್ಲಿ ಹಿಂದಿನಿಂದ ಜುಲೈನಿಂದ ಸೆಪ್ಟೆಂಬರ್ ತಿಂಗಳವರೆಗೆ ಗಿಡ ನೆಡುವ ಪದ್ದತಿಯನ್ನು ಅಳವಡಿಸಿಕೊಂಡು ಬರಲಾಗಿದೆ. ಇದನ್ನೇ ಈಗಲೂ ಅನುಸರಿಸಲಾಗುತ್ತಿದೆ. ಹೀಗೆ ಗಿಡ ನೆಡುವ ಪ್ರಕ್ರಿಯೆ ಆರಂಭವಾದ ಬಳಿಕ ಕಾಲಕಾಲಕ್ಕೆ ಅವುಗಳ ಪಾಲನೆ ಪೋಷಣೆ ಮಾಡುವುದು ಅತ್ಯಗತ್ಯ. ಯಾವ ತಳಿಯ ಗಿಡ ಎನ್ನುವುದರ ಮೇಲೆ ಅದರ ಪಾಲನಾ ಕಾರ್ಯ ನಡೆಯುತ್ತದೆ. ಹೀಗೆ ನಿಯಮಿತವಾಗಿ ಸಾಗುವ ಕಾರ್ಯ ಗಿಡವನ್ನು ಸದೃಢಗೊಳಿಸುತ್ತದೆ. ಅಂದಹಾಗೆ ಕಾಫಿಯ ಮೊದಲ ಕೊಯ್ಲಿನ ಅವಧಿ ನಿಗದಿಯಾಗುವುದು ಗಿಡ ನೆಟ್ಟ ಮೂರು ವರ್ಷಕ್ಕೆ. ಆದರೆ ಗಿಡಗಳ ಇಳುವರಿ ಲೆಕ್ಕ ಹಾಗೂ ಮುಂದಿನ ದಿನಗಳ ಸದೃಢತೆ ಸಲುವಾಗಿ ಸಾಮಾನ್ಯವಾಗಿ ನಾಲ್ಕು ಅಥವಾ ಐದನೇ ವರ್ಷದಲ್ಲಿ ರೈತರು ಮೊದಲ ಕೊಯ್ಲಿ ಪಡೆದುಕೊಳ್ಳುತ್ತಾರೆ. ಅಲ್ಲಿಯವರೆಗೆ ತಾಳ್ಮೆ ಅತ್ಯಗತ್ಯ.

ತಳಿ ಆಧಾರದಲ್ಲಿ ಗಿಡಗಳ ಆಯಸ್ಸು ನಿರ್ಧಾರವಾಗುತ್ತದೆ. ಹಿಂದಿನ ತಳಿಗಳಿದ್ದರೆ ಒಮ್ಮೆ ನೆಟ್ಟ ಈ ಗಿಡಗಳು ಸರಿ ಸುಮಾರು 30 ವರ್ಷಗಳ ವರೆಗೆ ಫಸಲು ನೀಡುತ್ತವೆ. ವರ್ಷಕ್ಕೊಂದು ಫಸಲು ನೀಡುವ ಈ ಕಾಫಿ ಮಾರ್ಚ್ ನಲ್ಲಿ ಹೂ ಬಿಡಲಾರಂಭಿಸಿ ಅಕ್ಟೋಬರ್ ತಿಂಗಳಿಗೆ ಮಾಗಿದ ಕಾಫಿ ಕಾಯಿಗಳನ್ನು ಕೊಡುತ್ತದೆ. ವಾರ್ಷಿಕ ಬೆಳೆಯಾದ ಇದು ಫಸಲು ಮತ್ತು ಹಣ್ಣಿನ ಕಳಿಯುವಿಕೆ ಆಧಾರದಲ್ಲಿ ಎರಡು ಕೊಯ್ಲಿಗೆ ಅವಕಾಶ ಮಾಡಿಕೊಡುತ್ತದೆ. ಹೀಗೆ ಗಿಡದಿಂದ ಬಿಡಿಸಿಕೊಂಡ ಕಾಫಿ ಬೀಜವನ್ನು ಬಳಿಕ ಒಣಗಿಸಿ ಉಂಡೆ ರೂಪದಲ್ಲೂ ಅಥವಾ ಸಿಪ್ಪೆ ಬಿಡಿಸಿ ಬೀಜದ ರೂಪದಲ್ಲೂ ಒಣಗಿಸಿ ಕಾಫಿ ಪುಡಿ ಮಾಡಲು ಬಳಸಲಾಗುತ್ತದೆ. ಇದರ ನಡುವಲ್ಲಿ ಹಲವು ಸಂಸ್ಕರಣಾ ಕಾರ್ಯಗಳು ಜರುಗುತ್ತವೆ.

ವೈದ್ಯಕೀಯ ಗುಣಗಳು : ಕಾಫಿ ಭಾರತೀಯರ ಹಾಗೂ ಕನ್ನಡಿಗರ ಅಚ್ಚುಮೆಚ್ಚಿನ ಪೇಯ. ಹೀಗಿರುವ ಕಾಫಿಯಲ್ಲಿ ವೈದ್ಯಕೀಯ ಗುಣಗಳಿವೆ. ಇದಕ್ಕೆ ಕಾರಣ ಇದರಲ್ಲಿರುವ ಕೆಫಿನ್ ಅಂಶ. ಈ ಅಂಶ ದೇಹವನ್ನು ಚಟುವಟಿಕೆಯಾಗಿಡುವ ಮನಸ್ಸನ್ನು ಉಲ್ಲಾಸಿತವಾಗಿಸುವ ಕಾರ್ಯ ಮಾಡುವಲ್ಲಿ ಸಹಕಾರಿಯಾಗುತ್ತದೆ.

(ಮಾಹಿತಿ ಕೃಪೆ: ಕನ್ನಡ ವಿಶ್ವಕೋಶ)