Ad Code

Responsive Advertisement

ಕಾಫಿ ರಫ್ತಿನಲ್ಲಿ ಒಂದು ಬಿಲಿಯನ್ ಡಾಲರ್ ಮೌಲ್ಯ ಮೀರಿ ದಾಖಲೆ ಬರೆದ ಭಾರತ; “ಭಾರತೀಯ ಕಾಫಿಯಿಂದ ಜಗತ್ತು ಎಚ್ಚರಗೊಳ್ಳುತ್ತಿದೆ"


ಕಾಫಿ ರಫ್ತಿನಲ್ಲಿ ಒಂದು ಬಿಲಿಯನ್ ಡಾಲರ್ ಮೌಲ್ಯ ಮೀರಿ ದಾಖಲೆ ಬರೆದ ಭಾರತ

“ಭಾರತೀಯ ಕಾಫಿಯಿಂದ ಜಗತ್ತು ಎಚ್ಚರಗೊಳ್ಳುತ್ತಿದೆ"

ನವದೆಹಲಿ: ದೇಶದ ಕಾಫಿ ರಫ್ತು ಮೌಲ್ಯ ಇದೇ ಮೊದಲ ಬಾರಿಗೆ ಒಂದು ಬಿಲಿಯನ್ ಅಮೇರಿಕನ್ ಡಾಲರ್ ಮೀರಿದ್ದು ದಾಖಲೆ ನಿರ್ಮಾಣವಾಗಿದೆ. ಈ ಕುರಿತು ಪತ್ರಿಕಾ ಮಾಹಿತಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ಸರ್ಕಾರದ ಪತ್ರಿಕಾ ಮಾಹಿತಿ ಕಚೇರಿಯ ಪ್ರಕಾರ, ಭಾರತವು ಕಾಫಿ ರಫ್ತಿನಲ್ಲಿ ಸ್ಥಿರವಾದ ಏರಿಕೆಯನ್ನು ದಾಖಲಿಸುತ್ತಿದೆ.

ಪಿಐಬಿ ಪ್ರಕಾರ, 1960-61 ರಿಂದ 2020-21 ರವರೆಗೆ ದೇಶದ ಕಾಫಿ ರಫ್ತು ಪ್ರಮಾಣದಲ್ಲಿ ಹನ್ನೆರಡು ಪಟ್ಟು ಹೆಚ್ಚಳವಾಗಿದೆ. ಆದರೆ ಮೌಲ್ಯದ ಪ್ರಕಾರ, ಭಾರತೀಯ ಕಾಫಿ ರಫ್ತು 1960-61 ರಿಂದ 2020-21 ರವರೆಗೆ 760 ಪಟ್ಟು ಹೆಚ್ಚಾಗಿದೆ. 2021-22ರಲ್ಲಿ ಮೊದಲ ಬಾರಿಗೆ ಕಾಫಿ ರಫ್ತು $1 ಬಿಲಿಯನ್ ದಾಟಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ತನ್ನ ವರದಿಯಲ್ಲಿ ಭಾರತವು 2020 ರಲ್ಲಿ ವಿಶ್ವದ ಏಳನೇ ಅತಿದೊಡ್ಡ ಕಾಫಿ ಉತ್ಪಾದಕ ಎಂದು ಹೇಳಿದೆ. ಕಳೆದ ಏಪ್ರಿಲ್ನಲ್ಲಿ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಅವರು ತಮ್ಮ ಕೂ ಸಾಮಾಜಿಕ ಖಾತೆಯಲ್ಲಿ ಕಾಫಿ ಬೆಳೆಗಾರರು ಮತ್ತು ರಫ್ತುದಾರರು ಕಾಫಿಯ ದಾಖಲೆಯ ರಫ್ತುಗಳನ್ನು ಸಕ್ರಿಯಗೊಳಿಸಿದ್ದಾರೆ, ಇದು ಒಂದು ಶತಕೋಟಿ ಡಾಲರ್ಗೂ ಹೆಚ್ಚು ಮೊತ್ತವಾಗಿದೆ ಎಂದು ಹೇಳಿದ್ದರು ಅಲ್ಲದೆ “ಭಾರತೀಯ ಕಾಫಿಯಿಂದ ಜಗತ್ತು ಎಚ್ಚರಗೊಳ್ಳುತ್ತಿದೆ. ನಮ್ಮ ಕಾಫಿ ಬೆಳೆಗಾರರು ಮತ್ತು ರಫ್ತುದಾರರು ಕಾಫಿಯ ದಾಖಲೆಯ ಒಂದು ಶತಕೋಟಿ ಡಾಲರ ಮೌಲ್ಯಕ್ಕೂ ಹೆಚ್ಚು ಕಾಫಿ ರಫ್ತು ಮಾಡಿದ್ದಾರೆ ಎಂದು ಬರೆದಿದ್ದರು.

ಭಾರತೀಯ ಕಾಫಿ ರಫ್ತು 2011-12 ರಿಂದ 2020-21 ರವರೆಗೆ ವಾರ್ಷಿಕ ಶೇಕಡಾ 3 ರ ದರದಲ್ಲಿ ಕುಸಿದ ನಂತರ ಈ ಬೆಳವಣಿಗೆ ದಾಖಲಾಗಿದೆ.

ಇಂಡಿಯನ್ ಬ್ರಾಂಡ್ ಇಕ್ವಿಟಿ ಫೌಂಡೇಶನ್ (IBEF) ತನ್ನ ಅಂಕಿ ಅಂಶದಲ್ಲಿ ದೇಶದ ಕಾಫಿ ರಫ್ತು 2022 ನೇ ಹಣಕಾಸು ವರ್ಷದಲ್ಲಿ $719.96 ಮಿಲಿಯನ್ ಇತ್ತು ಎಂದು ಉಲ್ಲೇಖಿಸಿದೆ. 2020 ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ ಮೂರರಷ್ಟು ಸ್ಥಾನ ಪಡೆದಿರುವ ಭಾರತವು ಟಾಪ್ 10 ಕಾಫಿ-ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ.

ಭಾರತೀಯ ಕಾಫಿಯನ್ನು ಅದರ ಉತ್ತಮ ಗುಣಮಟ್ಟದ ಕಾರಣದಿಂದಾಗಿ ವಿಶ್ವದ ಅತ್ಯುತ್ತಮ ಕಾಫಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲೂ ಹೆಚ್ಚಿನ ಪ್ರೀಮಿಯಂ ಪಡೆಯುತ್ತದೆ. ಭಾರತದಲ್ಲಿ ಎರಡು ರೀತಿಯ ಕಾಫಿಯನ್ನು ಉತ್ಪಾದಿಸಲಾಗುತಿದ್ದು ಅರೇಬಿಕಾ ಅದರ ಸೌಮ್ಯವಾದ ಆರೊಮ್ಯಾಟಿಕ್ ಪರಿಮಳದಿಂದಾಗಿ ರೋಬಸ್ಟಾ ಕಾಫಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ರೋಬಸ್ಟಾ ಕಾಫಿಯನ್ನು ಅದರ ಬಲವಾದ ಸುವಾಸನೆಯಿಂದಾಗಿ ವಿವಿಧ ಮಿಶ್ರಣಗಳನ್ನು ತಯಾರಿಸಲು ಬಳಸಲಾಗುತ್ತದೆ. ರೋಬಸ್ಟಾವು ದೇಶದ ಒಟ್ಟು ಉತ್ಪಾದನೆಯ ಶೇಕಡಾ 72 ರಷ್ಟು ಪಾಲನ್ನು ಹೊಂದಿದೆ.

ಭಾರತದಲ್ಲಿ 2 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕಾಫಿ ಉದ್ಯಮವು ನೇರ ಉದ್ಯೋಗವನ್ನು ಒದಗಿಸಿದೆ ಎಂದು ಐಬಿಇಎಫ್ ವರದಿ ಹೇಳಿದೆ. ಕಾಫಿ ಮುಖ್ಯವಾಗಿ ಭಾರತಕ್ಕೆ ರಫ್ತು ಸರಕು ಆಗಿರುವುದರಿಂದ, ದೇಶೀಯ ಬೇಡಿಕೆ ಮತ್ತು ಬಳಕೆ ಕಾಫಿಯ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ.

ದಕ್ಷಿಣ ಭಾರತದಲ್ಲಿ ಕಾಫಿಯನ್ನು ಹೆಚ್ಚಾಗಿ ಉತ್ಪಾದಿಸಲಾಗುತಿದ್ದು ಕರ್ನಾಟಕವು ಭಾರತದ ಒಟ್ಟು ಕಾಫಿ ಉತ್ಪಾದನೆಯ ಸುಮಾರು 70 ರಷ್ಟು ಪಾಲನ್ನು ಹೊಂದಿರುವ ಅತಿದೊಡ್ಡ ಉತ್ಪಾದಕವಾಗಿದೆ. ಕೇರಳವು ಕಾಫಿಯ ಎರಡನೇ ಅತಿದೊಡ್ಡ ಉತ್ಪಾದಕರಾಗಿದ್ದು, ಒಟ್ಟಾರೆ ಉತ್ಪಾದನೆಯ ಶೇಕಡಾ 23 ರಷ್ಟು ಪಾಲನ್ನು ಹೊಂದಿದ್ದರೆ ತಮಿಳುನಾಡು ಮೂರನೇ ಅತಿದೊಡ್ಡ ಉತ್ಪಾದಕವಾಗಿದೆ, ಅದು ದೇಶದ ಉತ್ಪಾದನೆಯಲ್ಲಿ ಶೇಕಡಾ 6ರಷ್ಟು ಕಾಫಿಯನ್ನು ಉತ್ಪಾದಿಸಲಾಗುತ್ತದೆ. ತಮಿಳುನಾಡಿನ ಅರ್ಧದಷ್ಟು ಕಾಫಿಯನ್ನು ಅರೇಬಿಕಾ ಬೆಳೆಯುವ ಪ್ರಮುಖ ಪ್ರದೇಶವಾದ ನೀಲಗಿರಿ ಜಿಲ್ಲೆಯಲ್ಲಿ ಉತಾದಿಸಲಾಗುತ್ತಿದೆ. ಒರಿಸ್ಸಾ ಮತ್ತು ಈಶಾನ್ಯ ಪ್ರದೇಶಗಳು ಕಡಿಮೆ ಪ್ರಮಾಣದ ಉತ್ಪಾದನೆಯನ್ನು ಹೊಂದಿವೆ.

ಐ ಬಿ ಇ ಎಫ್ ಅಂಕಿಅಂಶಗಳ ಪ್ರಕಾರ, ಇಟಲಿ, ಜರ್ಮನಿ, ಬೆಲ್ಜಿಯಂ ಮತ್ತು ರಷ್ಯ ಭಾರತದಿಂದ ಅತಿ ಹೆಚ್ಚು ಕಾಫಿ ಆಮದುದಾರ ರಾಷ್ಟ್ರಗಳಾಗಿದ್ದು ಒಟ್ಟು ಉತ್ಪಾದನೆಯ ಶೇಕಡಾ 45 ರಷ್ಟು ಕಾಫಿಯನ್ನು ಆಮದು ಮಾಡಿಕೊಳ್ಳುತ್ತಿವೆ. ಇತರ ಕಾಫಿ ಆಮದು ಮಾಡಿಕೊಳ್ಳುವ ದೇಶಗಳೆಂದರೆ ಲಿಬಿಯಾ, ಪೋಲೆಂಡ್, ಜೋರ್ಡಾನ್, ಮಲೇಷ್ಯಾ, ಅಮೇರಿಕಾ ಸ್ಲೊವೇನಿಯಾ ಮತ್ತು ಆಸ್ಟ್ರೇಲಿಯಾ ಆಗಿವೆ. ಈ ಬಾರಿ ವಿಶ್ವದ ಅತೀ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರ ಬ್ರೆಜಿಲ್ ನಲ್ಲಿ ಹಿಮದಿಂದಾಗಿ ಫಸಲು ನಷ್ಟ ಆಗಿರುವುದರಿಂದ ಕಾಫಿ ಬೆಲೆಯು ಏರುಮುಖವಾಗಿದ್ದು ಬೆಳೆಗಾರರಿಗೆ ಒಂದಷ್ಟು ನೆಮ್ಮದಿ ಲಭಿಸಿದೆ.

✍️....ಕೋವರ್‌ ಕೊಲ್ಲಿ ಇಂದ್ರೇಶ್‌ 

       ( ಪತ್ರಕರ್ತರು )

( ಕೋವರ್‌ ಕೊಲ್ಲಿ ಇಂದ್ರೇಶ್‌ )